ಬೆಂಗಳೂರು: ನಾನು ಇಸ್ಲಾಂ ಕುಟುಂಬದಲ್ಲೇ ಬೆಳೆದಿರುವವಳು, ಆದರೆ ನಾನು ಹಿಜಾಬ್ ಹಾಕಲ್ಲ, ಹಾಗಂತ ನಾನು ಹಿಜಾಬ್ ಹಾಕುವವರ ವಿರೋಧಿಯಂತೂ ಅಲ್ಲ ಎಂದು ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಹೇಳಿದ್ದಾರೆ.
ರಾಜ್ಯದಲ್ಲಿ ತಾರಕ್ಕೇರಿರುವ ಹಿಜಾಬ್ ವಿವಾದದ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಹಾನ ಸೈಯದ್, ಬಟ್ಟೆ ಅನ್ನೋದು ಅವರವರ ವೈಯಕ್ತಿಕ ವಿಚಾರ. ನಾನು ಹಿಜಾಬ್ ಹಾಕಲ್ಲ ಅಂತ ನನ್ನ ಪರ, ವಿರೋಧ ಚರ್ಚೆಗಳಾಗಿವೆ. ಹಿಜಾಬ್ ಆಗಲಿ, ಬೇರೆ ಬಟ್ಟೆಯನ್ನಾಗಲೀ ಇಂತದ್ದನ್ನೇ ಹಾಕಬೇಕು, ಹಾಕಬಾರದು ಎಂದು ಒತ್ತಾಯ ಮಾಡುವ ಹಕ್ಕು ಯಾರಿಗೂ ಇಲ್ಲ ಎನ್ನುವುದು ನನ್ನ ವೈಯಕ್ತಿಕ ನಿಲುವು ಎಂದಿದ್ದಾರೆ.
ಶಿಕ್ಷಣ ಅನ್ನೋದು ಧರ್ಮವನ್ನು ಮೀರಿದ್ದು, ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಯಾವುದೇ ಭಾಷೆ, ಧರ್ಮ, ಜಾತಿ, ಲಿಂಗ, ಬಟ್ಟೆಗೆ ಇಲ್ಲ. ಈ ಕಾರಣಕ್ಕಾಗಿ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗ್ತಾರೆ ಅಂದ್ರೆ ಅದು ತಪ್ಪು. ಓದಬೇಕು ಅಂತಿರೋ ಎಲ್ಲಾ ಹೆಣ್ಣು ಮಕ್ಕಳ ಪರ ನಾನಿದ್ದೀನಿ. ವಿದ್ಯೆ ಅನ್ನೋದು ಎಲ್ಲರ ಹಕ್ಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.