ಪಾಟ್ನಾ: ದೇಶದಲ್ಲಿ ಜನರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಿಹಾರದ 84 ವರ್ಷದ ವೃದ್ಧರೊಬ್ಬರು 11 ಬಾರಿ ಕೋವಿಡ್ ಲಸಿಕೆ ಪಡೆದು ಎಲ್ಲರಲ್ಲಿಯೂ ಅಚ್ಚರಿಯನ್ನು ಮೂಡಿಸಿದ್ದಾರೆ.
84 ವರ್ಷದ ಬ್ರಹ್ಮದೇವ್ ಮಂಡಲ್ ಎಂಬ ವ್ಯಕ್ತಿಯು 11 ಬಾರಿ ಲಸಿಕೆಯನ್ನು ಪಡೆದಿದ್ದಾರೆ. ಇವರು ಮಧೇಪುರ ಜಿಲ್ಲೆಯ ಓರಾಯ್ ಗ್ರಾಮದ ನಿವಾಸಿಯಾಗಿದ್ದು, ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದಾರೆ. ‘ಲಸಿಕೆಯಿಂದ ನನಗೆ ತುಂಬಾ ಉಪಯೋಗವಾಗಿದೆ. ಆದ್ದರಿಂದ್ ನಾನು 11 ಬಾರಿ ಲಸಿಕೆ ಪಡೆದೆ. 2021 ರ ಫೆಬ್ರವರಿ 13 ರಂದು ಮೊದಲ ಡೋಸ್ ಪಡೆದಿದ್ದು, ಡಿಸೆಂಬರ್ 30 ರ ಒಳಗೆ 11 ಡೋಸ್ ಲಸಿಕೆ ಪಡೆದಿದ್ದೇನೆ. ಈ ಕುರಿತ ವಿವರವನ್ನು ಬರೆದಿಟ್ಟಿದ್ದೇನೆ. ನನ್ನ ಆಧಾರ್ ಮತ್ತು ಫೋನ್ ನಂಬರ್ ಅನ್ನು 8 ಬಾರಿ ಲಸಿಕೆ ಪಡೆಯಲು ನೀಡಿದ್ದೇನೆ. ನಂತರ 3 ಬಾರಿ ವೋಟರ್ ಐಡಿ ಹಾಗೂ ಪತ್ನಿಯ ಮೊಬೈಲ್ ನಂಬರ್ ನೀಡಿ ಲಸಿಕೆ ಪಡೆದಿದ್ದೆ. ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದಿದ್ದು, 12ನೇ ಬಾರಿ ಡೋಸ್ ಲಸಿಕೆ ಪಡೆಯುವಾಗ ಸಿಕ್ಕಿಬಿದ್ದಿದ್ದೇನೆ ಎಂದಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಲಸಿಕಾ ಕ್ಯಾಂಪ್ ವೇಳೆ, ಸಿಬ್ಬಂದಿಯು ಆಧಾರ್ ಮತ್ತು ಫೋನ್ ನಂಬರ್ ಅನ್ನು ಪುಸ್ತಕದಲ್ಲಿ ನಮೂದಿಸಿಕೊಂಡು ಲಸಿಕೆ ನೀಡುತ್ತಾರೆ. ಸಂಜೆಯ ವೇಳೆಗೆ ಡೇಟಾಬೇಸ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಹೀಗೆ ಅಪ್ಲೋಡ್ ಮಾಡುವಾಗ ಈ ವ್ಯಕ್ತಿಯು 2 ಡೋಸ್ ಲಸಿಕೆ ಪಡೆದಿರುವುದಾಗಿ ತಿಳಿದುಬರುತ್ತದೆ. ಆದರೆ ಅಷ್ಟೊತ್ತಿಗೆ ಆ ವ್ಯಕ್ತಿ ಲಸಿಕೆ ಪಡೆದು ಹೋಗಿರುತ್ತಾರೆ. ಇದರಿಂದಾಗಿ ಆ ವ್ಯಕ್ತಿಯು 11 ಬಾರಿ ಲಸಿಕೆ ಪಡೆಯಲು ಸಾಧ್ಯವಾಗಿದೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ಜಿಲ್ಲಾ ಸಿವಿಲ್ ಸರ್ಜನ್ ತಿಳಿಸಿದ್ದಾರೆ.