ನವದೆಹಲಿ: 69 ವರ್ಷಗಳ ಕಾಲ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಸಮೂಹ ಸಂಸ್ಥೆ ಸರ್ಕಾರದಿಂದ ನಿನ್ನೆ ಅಧಿಕೃತವಾಗಿ ಮರಳಿ ಪಡೆದಿದೆ. ಏರ್ ಇಂಡಿಯಾವನ್ನು ಮರಳಿ ಪಡೆದ ನಂತರ ಆಡಳಿತ ಮಂಡಳಿಯು ಹಲವು ಬದಲಾವಣೆಗಳನ್ನು ಮಾಡಿದೆ.
ವಿಮಾನಗಳು ಸಮಯಕ್ಕೆ ಸರಿಯಾಗಿ ಟೇಕಾಫ್-ಲ್ಯಾಂಡಿಗ್ ಆಗಬೇಕು. ಪ್ರಯಾಣಕ್ಕೆ 10 ನಿಮಿಷ ಮೊದಲೇ ವಿಮಾನದ ಬಾಗಿಲು ಮುಚ್ಚಲು ಪ್ರಯತ್ನಿಸಬೇಕು. ಮುಂದಿನ ವಾರದೊಳಗೆ ಸಿಬ್ಬಂದಿಗಳ ವರ್ಚಸ್ಸು, ಮನೋವೃತ್ತಿ, ಗ್ರಹಿಕೆ ಬದಲಾಗಬೇಕು ಹೀಗೆ ಹಲವು ಶಿಸ್ತಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಮುಂಬೈ – ನವದೆಹಲಿ (2 ವಿಮಾನ), ಮುಂಬೈ – ಬೆಂಗಳೂರು, ಮುಂಬೈ – ಅಬುಧಾಬಿ ವಿಮಾನಗಳಲ್ಲಿ ಊಟದ ವ್ಯವಸ್ಥೆ ಬದಲಾವಣೆ ಮಾಡಲಾಗಿದ್ದು, ಸಿಬ್ಬಂದಿಗಳು ಉತ್ತಮವಾಗಿ ಕಾಣುವಂತೆ ಡ್ರೆಸ್ ಮಾಡಿಕೊಳ್ಳಬೇಕು ಹಾಗೂ ನಿಯಮ ಪಾಲನೆ ಮಾಡಬೇಕು ಎಂಬ ಆದೇಶ ಹೊರಡಿಸಲಾಗಿದೆ.
2021 ರ ಅಕ್ಟೋಬರ್ ನಲ್ಲಿ ಸರ್ಕಾರ ಏರ್ ಇಂಡಿಯಾವನ್ನು ಹರಾಜಿಗೆ ಇರಿಸಿದಾಗ ಟಾಟಾ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾದ ತಾಲೇಸ್ ಪ್ರೈವೇಟ್ ಲಿಮಿಟೆಡ್ 18 ಸಾವಿರ ಕೋಟಿ ರೂಪಾಯಿಗೆ ಏರ್ ಇಂಡಿಯಾವನ್ನು ಖರೀದಿ ಮಾಡಿತ್ತು.