ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದೇಶದಾಂದ್ಯಂತ ಸಂಚಲನ ಸೃಷ್ಟಿಸಿದ್ದು, ಈಗಾಗಲೇ 200ಕೋಟಿ ಕಲೆಕ್ಷನ್ ಮಾಡಿದೆ. ಹಾಗೇ ಈ ಚಿತ್ರಕ್ಕೆ ಕ್ರೇಜಿ ಫ್ಯಾನ್ಸ್ ಕೂಡ ಹುಟ್ಟಿಕೊಂಡಿದ್ದು, ಇದೀಗ ತನ್ನ ರಕ್ತದಿಂದ ಓರ್ವ ಮಹಿಳೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪೋಸ್ಟರ್ ರಚಿಸಿದ್ದಾರೆ.
ರಕ್ತದಿಂದ ಪೋಸ್ಟರ್ ರಚಿಸಿದ ಮಹಿಳೆ ಹೆಸರು ಮಂಜೂ ಸೋನಿ. ತನ್ನ ದೇಹದಿಂದ 10ಎಂಎಲ್ ರಕ್ತವನ್ನು ತೆಗೆದು ಚಿತ್ರದ ಪೋಸ್ಟರ್ ರಚಿಸಿದ್ದಾರೆ. ಚಿತ್ರದ ಬಗ್ಗೆ ತಮಗಿರುವ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.
ಪೋಸ್ಟರ್ ಕುರಿತು ಟ್ವೀಟ್ ಮಾಡಿದ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಓಹ್ ಮೈ ಗಾಡ್. ನನಗೆ ಏನು ಹೇಳಬೇಕು ಎಂದು ತೋಚುತ್ತಿಲ್ಲ. ಮಂಜೂ ಸೋನಿ ಜಿ ಗೆ ಹೇಗೆ ಧನ್ಯವಾದ ತಿಳಿಸಬೇಕು ಎಂದು ತಿಳಿಯುತ್ತಿಲ್ಲ. ಅವರಿಗೆ ನನ್ನ ಶತ ಶತ ಪ್ರಣಾಮಗಳು, ಕೃತಜ್ಞತೆಗಳು. ಅವರ ಪರಿಚಯ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್ ಮೆಸೇಜ್ ಮಾಡಿ’ ಎಂದಿದ್ದಾರೆ.
ಆ ಬಳಿಕ ಮತ್ತೆ ಟ್ವೀಟ್ ಮಾಡಿದ ಅವರು ‘ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ. ಆದರೂ ಈ ರೀತಿಯಾಗಿ ಯಾವುದನ್ನೂ ಪ್ರಯತ್ನಿಸಬೇಡಿ ಎಂದು ನಾನು ಗಂಭೀರವಾಗಿ ಮನವಿ ಮಾಡಿಕೊಳ್ಳುತ್ತೇನೆ. ಇದು ಒಳ್ಳೆಯದಲ್ಲ’ ಎಂದಿದ್ದಾರೆ.