ದೇಶದಲ್ಲಿ ದಿನದಿಂದ ಕೊರೊನಾ ಹಾಗೂ ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ಸಂಜೆ 4.30ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಇಂದು 2.47 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 380 ಮಂದಿ ಸೋಂಕಿನಿಂದ ಮರಣಹೊಂದಿದ್ದಾರೆ. ಹಲವು ರಾಜ್ಯಗಳು ಕೊವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನೈಟ್ ಕರ್ಫ್ಯೂ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧಗಳನ್ನು ಹೇರಿವೆ. ಆದರೂ ಕೂಡ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಮಹಾರಾಷ್ಟ್ರ, ಪಶ್ಚಿಮಬಂಗಾಳ, ಕರ್ನಾಟಕ, ರಾಜಸ್ಥಾನ ಸೇರಿ ಕೆಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.
ಇಂದು ನಡೆಯುವ ಈ ಸಭೆಯಲ್ಲಿ ದೇಶದ ಕೊವಿಡ್ 19 ಪರಿಸ್ಥಿತಿ ಮತ್ತು ಜಾಗತಿಕವಾಗಿ ಯಾವ್ಯಾವ ದೇಶದಲ್ಲಿ ಯಾವ ಪರಿಸ್ಥಿತಿ ಇದೆ ಎನ್ನುವುದರ ಕುರಿತು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪ್ರಧಾನಮಂತ್ರಿಗೆ ವರದಿ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಮಾಹಿತಿ ನೀಡಿದೆ.