ನವದೆಹಲಿ: ಸುಪ್ರೀಂ ಕೋರ್ಟ್ ಗೇಟ್ (ಎಂಜಿನಿಯರಿಂಗ್ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್) ಪರೀಕ್ಷೆಯನ್ನು ಮುಂದೂಡಲು ನಿರಾಕರಿಸಿದ್ದು, ಈಗಾಗಲೇ ನಿಗದಿಯಾಗಿರುವ ಫೆಬ್ರವರಿ 5 ರಂದು ಪರೀಕ್ಷೆ ನಡೆಸಲು ಆದೇಶ ನೀಡಿದೆ.
ಗೇಟ್ ಪರೀಕ್ಷೆಯ ದಿನಾಂಕ ನಿಗದಿಯಾಗಿ 48 ಗಂಟೆಗಳಾಗಿದ್ದು, ಈ ಮಧ್ಯೆ ಪರೀಕ್ಷೆ ಮುಂದೂಡುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಭವಿಷ್ಯದ ಮೇಲೆ ಚೆಲ್ಲಾಟವಾಡಿದಂತಾಗುತ್ತದೆ. ಇದು ಸಾಧ್ಯವಿಲ್ಲ. ಯಾವಾಗ ಪರೀಕ್ಷೆಯನ್ನು ಮಾಡಬೇಕು ಎನ್ನುವುದು ಶೈಕ್ಷಣಿಕ ನೀತಿಯಾಗಿದ್ದು, ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
ಈ ಬಾರಿ ಸುಮಾರು 200 ಕೇಂದ್ರಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳು ಭೌತಿಕವಾಗಿ ಗೇಟ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಗೇಟ್ ಪರೀಕ್ಷೆಯನ್ನು ಮುಂದೂಡುವಂತೆ ಸುಮಾರು 20 ಸಾವಿರ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಸಹಿ ಮಾಡಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.