ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರು ಬೆನ್ನು ನೋವಿನಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ನಾವು ಸೇವಿಸುವ ಆಹಾರ, ಒತ್ತಡದ ಜೀವನ ಹಾಗೂ ಮುಖ್ಯವಾಗಿ ಬದಲಾದ ಜೀವನಶೈಲಿ ಆಗಿದೆ. ಒಂದು ವೇಳೆ ಗಂಭೀರವಾದ ಬೆನ್ನು ನೋವಿನಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಮನೆಯಲ್ಲಿಯೇ ನೀವು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಬೆನ್ನು ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
- ನಾವು ಮಲಗುವ ಭಂಗಿಯಿಂದಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ಬೆನ್ನು ನೋವು ಯದ್ವಾತದ್ವಾ ಮಲಗುವುದರಿಂದ ಇನ್ನಷ್ಟು ಉಲ್ಭಣವಾಗುತ್ತದೆ. ಆದ್ದರಿಂದ ಮಲಗುವ ಭಂಗಿಯನ್ನು ಬದಲಾಯಿಸಿಕೊಳ್ಳಿ.
- ಬೆನ್ನು ನೋವು ಕಡಿಮೆ ಆಗಲು ಪ್ರತಿನಿತ್ಯ 30 ನಿಮಿಷ ವಾಕ್ ಮಾಡಬೇಕು. ದೈನಂದಿನ ಚಲನೆಯು ಬೆನ್ನು ನೋವಿಗೆ ಒಂದು ರೀತಿಯ ಚಿಕಿತ್ಸೆಯಾಗಿದೆ.
- ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ. ವ್ಯಾಯಾಮ ಮಾಡುವುದರಿಂದ ಸೊಂಟದ ಸುತ್ತಲಿನ ಸ್ನಾಯುಗಳು ಹಾಗೂ ಬೆನ್ನು ಮೂಳೆಗಳು ಬಲವಾಗುತ್ತದೆ. 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವ್ಯಾಯಾಮ ಮಾಡುವುದರಿಂದ ಮಧುಮೇಹ, ರಕ್ತದೊತ್ತಡ, ಹೃದ್ರೋಗದಂತಹ ಖಾಯಿಲೆಗಳಿಂದ ದೂರವಿರಬಹುದು.
- ಸಂಶೋಧನೆಯ ಪ್ರಕಾರ ಧೂಮಪಾನ ಮಾಡುವವರು ಸಾಮಾನ್ಯರಿಗಿಂತ ನಾಲ್ಕು ಪಟ್ಟು ಹೆಚ್ಚು ಡಿಜೆನೆರೇಟಿವ್ ಡಿಸ್ಕ್ ಖಾಯಿಲೆಗೆ ತುತ್ತಾಗುತ್ತಾರೆ. ಏಕೆಂದರೆ ಸಿಗರೇಟ್ ಹಾಗೂ ಇತರ ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಬೆನ್ನು ಮೂಳೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಧೂಮಪಾನ ಮಾಡದೇ ಇರುವುದು ಉತ್ತಮ.
- ದೇಹದ ತೂಕ ಹೆಚ್ಚಾದರೆ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪ್ರತಿನಿತ್ಯ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸಿ, ನಿಯಮಿತ ವ್ಯಾಯಾಮ ಮಾಡುವ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬೇಕು.
ತಾಳಲಾರದ ಬೆನ್ನು ನೋವು ಬಂದಾಗ ತಕ್ಷಣ ಬೆನ್ನು ನೋವಿಗೆ ಪರಿಹಾರ ಬೇಕೆನ್ನುವವರು ಐಸ್ ಪ್ಯಾಕ್ ಅನ್ನು ಬಳಸುವುದು ಉತ್ತಮ. ಇದು ಬೆನ್ನು ಊತ ಅಥವಾ ಉರಿಯೂತದಂತ ತೊಂದರೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಹಾಗೂ ಬಿಗಿಯಾದ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಐಸ್ ಪ್ಯಾಕ್ ಗೆ ಪರ್ಯಾಯವಾಗಿ ಹೀಟಿಂಗ್ ಪ್ಯಾಡ್ ಅನ್ನು ಬಳಸಬಹುದು. 20 ನಿಮಿಷಗಳ ಕಾಲ ಐಸ್ ಪ್ಯಾಕ್ ಅಥವಾ ಹೀಟಿಂಗ್ ಪ್ಯಾಡ್ ನ ಚಿಕಿತ್ಸೆ ಪಡೆಯುವುದರಿಂದ ಬೆನ್ನು ನೋವು ನಿವಾರಣೆಯಾಗುತ್ತದೆ.