ಕಾಪು: ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಹಾಗೂ ಹೆಜಮಾಡಿ ಟೋಲ್ನಲ್ಲಿ ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಸುರತ್ಕಲ್ ಟೋಲ್ ಗೇಟ್ ಚಲೋ ಪಾದಯಾತ್ರೆ ಮಂಗಳವಾರ ಹೆಜಮಾಡಿಯಿಂದ ಆರಂಭಗೊಂಡಿತು.
ಹೆಜಮಾಡಿ ಟೋಲ್ ಗೇಟ್ ಸಮೀಪದ ಜೂನಿಯರ್ ಕಾಲೇಜು ಬಳಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಟೋಲ್ಗೇಟಿನಲ್ಲಿ ಸಾರ್ವಜನಿಕರಿಂದ ಅನೈತಿಕವಾಗಿ ಸುಂಕ ವಸೂಲಿ ಮಾಡುತ್ತಿರುವುದುರಿಂದ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ಹಿನ್ನಲೆ ದ.ಕ. ಮತ್ತು ಉಡುಪಿ ಉಭಯ ಜಿಲ್ಲೆಗಳ ನಾಗರಿಕರು ಸ್ವಯಂ ಪ್ರೇರಿತರಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಹೋರಾಟದ ಮೂಲಕ ಸುರತ್ಕಲ್ ಟೋಲ್ ತೆರವು ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ಜೈಲ್ಭರೋ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಪಾದಯಾತ್ರೆಯು ಹೆಜಮಾಡಿ, ಮುಲ್ಕಿ, ಕೊಳ್ನಾಡು, ಹಳೆಯಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರತ್ಕಲ್ ಎನ್ಐಟಿಕೆ ಟೋಲ್ಗೇಟ್ಗೆ ತಲುಪಲಿದೆ. ಪಾದಯಾತ್ರೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯ 50ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದೆ.
ಪಾದಯಾತ್ರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯಿದಿನ್ ಬಾವ, ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ, ಬಿಲ್ಲವ ಮಹಾಮಂಡಳದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು.