ಬ್ರಿಟನ್: ಪ್ರೇಮಿಗಳ ದಿನ ಸಮೀಪಿಸುತ್ತಿದ್ದು, ಕೆಲವರು ಈ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಇನ್ನು ಕೆಲವರಿಗೆ ಈ ದಿನವು ಖುಷಿಯನ್ನು ತಂದುಕೊಡುವುದಿಲ್ಲ. ಕಾರಣ ಈ ದಿನ ಅವರಿಗೆ ಹಳೇ ಪ್ರೇಮಿಯ ನೆನಪಾಗಬಹುದು, ಅವರು ಕೈಕೊಟ್ಟು ಹೋಗಿರುವುದರಿಂದ ಈ ದಿನವೆಂದರೆ ಕೆಲವರಿಗೆ ಸಿಟ್ಟು ತರಿಸುತ್ತದೆ. ಬ್ರಿಟನ್ನ ಹೆಂಸ್ಲೆ ಕನ್ಸರ್ವೇಶನ್ ಸೆಂಟರ್ (ಹೆಚ್ಸಿಸಿ) ನೊಂದ ಪ್ರೇಮಿಗಳಿಗಾಗಿ ಬಂಪರ್ ಆಫರ್ ನೀಡಿದೆ.
ಹಳೆ ಪ್ರೇಮಿಗಳ ಮೇಲೆ ಇರುವ ಕೋಪವನ್ನು ತೀರಿಸಿಕೊಳ್ಳಲು ಜಿರಳೆಗಳಿಗೆ ಹಳೇ ಪ್ರೇಮಿಗಳ ಹೆಸರನ್ನಿಟ್ಟು ಕೋಪ ತೀರಿಸಿಕೊಳ್ಳುವ ಆಫರ್ ಅನ್ನು ಈ ಸಂಸ್ಥೆ ನೀಡಿದೆ. ಹೀಗೆ ಜಿರಳೆಗಳಿಗೆ ಮರುನಾಮಕರಣ ಮಾಡಲು 1.50 ಯೂರೋ ಅಥವಾ 150 ರೂಪಾಯಿ ನಿಗದಿ ಪಡಿಸಲಾಗಿದ್ದು, ಈ ಹಣವನ್ನು ಹೆಚ್ಸಿಸಿಯ ಅಭಿವೃದ್ಧಿಪರ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಮರುನಾಮಕರಣಗೊಂಡ ಜಿರಳೆಗಳನ್ನು ‘ರೋಚ್ ಬೋರ್ಡ್’ನಲ್ಲಿ ಪ್ರದರ್ಶಿಸಲಾಗುತ್ತದೆ. ಫೆಬ್ರವರಿ 10 ರ ಮಧ್ಯಾಹ್ನ 12 ಗಂಟೆಯ ವರೆಗೆ ಮರುನಾಮಕರಣ ನೋಂದಣಿಗೆ ಅವಕಾಶವಿದೆ.
ಹಳೆ ಪ್ರೇಮಿಗಳ ಹೆಸರನ್ನು ಜಿರಳೆಗಳಿಗೆ ಇಡುವ ಯೋಜನೆಯು “ನಿಮ್ಮಲ್ಲಿನ ಋಣಾತ್ಮಕ ಯೋಚನೆಗಳನ್ನು ದೂರ ಮಾಡಿ ನಿಮ್ಮ ಮುಖದಲ್ಲಿ ನಗು ಮೂಡಿಸಲು ರೂಪಿಸಲಾಗಿದೆ” ಎಂದು ಹೆಚ್ಸಿಸಿ ಸಂಸ್ಥೆಯು ತಿಳಿಸಿದೆ. ಜಿರಳೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಬಹುದು, ಹಾಗೇ ನಿಮ್ಮ ಹಳೇ ಪ್ರೇಮಿಗೆ ಗೌರವ ಅಥವಾ ಜಿರಳೆಗೆ ಹಳೇ ಪ್ರೇಮಿ ಹೆಸರಿಟ್ಟು ಕ್ಷುಲ್ಲಕವೆಂದು ಭಾವಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಇದೀಗ ಈ ಯೋಜನೆಯು ವಿವಿಧ ರಾಷ್ಟ್ರಗಳಲ್ಲಿ ಜನಪ್ರಿಯವಾಗುತ್ತಿದ್ದು, ಪ್ರೇಮಿಗಳ ದಿನದ ಸಂದರ್ಭದಂದು ಟೆಕ್ಸಾಸ್ನಲ್ಲಿರುವ ಸ್ಯಾನ್ ಆಂಟೋನಿಯೊ ಮೃಗಾಲಯ, ನ್ಯೂಯಾರ್ಕ್ನ ಬ್ರಾಂಕ್ಸ್ ಮೃಗಾಲಯ, ಚಿಕಾಗೋದ ಬ್ರೂಕ್ಫೀಲ್ಡ್ ಮೃಗಾಲಯ, ಯುಕೆಯ ಡೆವೊನ್ನ ಡಾರ್ಟ್ಮೂರ್ ಮೃಗಾಲಯ ಮತ್ತು ಹಲವು ಮೃಗಾಲಯಗಳು ಹಾಗೂ ಹಲವು ಅಧ್ಯಯನ ಕೇಂದ್ರಗಳು ಈ ಆಫರ್ ನೀಡುತ್ತಿದೆ.