ರಾಜ್ ಬಿ. ಶೆಟ್ಟಿ ಅವರು ತಮ್ಮ ವಿಭಿನ್ನ ನಟನೆ ಹಾಗೂ ನಿರ್ದೇಶನದ ಮಾಡುವ ಮೂಲಕ ಪ್ರಸಿದ್ಧರಾದವರು. ಕಳೆದ ವರ್ಷ ಬಿಡುಗಡೆಯಾದ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗೆ ದೇಶಾದ್ಯಂತ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ನಂತರ ಒಟಿಟಿ ಪ್ಲಾಟ್ಫಾರ್ಮ್ ನಲ್ಲೂ ಭಾರೀ ಮೊತ್ತಕ್ಕೆ ಈ ಸಿನಿಮಾ ಸೇಲ್ ಆಗಿತ್ತು. ಈ ಸಿನಿಮಾಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಅವರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದೆ. ಇತ್ತೀಚಿನ ಕೆಲ ಕನ್ನಡ ಸಿನಿಮಾಗಳು ಕನ್ನಡ ಚಿತ್ರರಂಗದತ್ತ ಪರಭಾಷೆ ಪ್ರೇಕ್ಷಕರ ಗಮನ ಸೆಳೆಯುವಂತೆ ಮಾಡುತ್ತಿದೆ.
ಒಟಿಟಿ ಪ್ಲಾಟ್ಫಾರ್ಮ್ ಜೀ5ನಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾವು ಬಿಡುಗಡೆಯಾದ ನಂತರ ಬೇರೆ ಬೇರೆ ರಾಜ್ಯದ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ಸಹ ಹಲವರು ಸಿನಿಮಾವನ್ನು ವಿಮರ್ಶಿಸಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ರಾಣಾ ದಗ್ಗುಬಾಟಿ ಅವರಿಗೆ ಅಭಿಮಾನಿಯೊಬ್ಬರು ‘ರಾಣಾ ದಗ್ಗುಬಾಟಿ ಅವರೇ, ದಯವಿಟ್ಟು ನೀವು ಸ್ವಲ್ಪ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಿ. ನಿಮ್ಮ ಅಭಿಪ್ರಾಯ ತಿಳಿಸಬೇಕೆಂದು ಬಯಸುತ್ತೇನೆ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರವಾಗಿ ರಾಣಾ ‘ಇದು ಅದ್ಭುತವಾಗಿದೆ. ತುಂಬ ಇಷ್ಟಪಟ್ಟಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಸಿನಿಮಾವು ಜನವರಿ 13ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ನಿಮಿಷಗಳ ವೀಕ್ಷಣೆ ಕಾಣುವ ಮೂಲಕ ಒಟಿಟಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.