ಬಾಳೆ ಹೂವು ಜೀರ್ಣಕ್ರಿಯೆ, ಮಧುಮೇಹ, ವಿವಿಧ ರೀತಿಯ ಕ್ಯಾನ್ಸರ್, ಅತಿಸಾರ, ಆಮಶಂಕೆ ಹೀಗೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಬಾಳೆಹೂವು ಔಷಧಿಯಾಗಿದೆ. ಬಾಳೆ ಹೂವಿನಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ನಾವು ಕೆಸು ಎಲೆಯಿಂದ ಪತ್ರೊಡೆಯನ್ನು ಮಾಡುತ್ತೇವೆ. ಅದೇ ರೀತಿಯಲ್ಲಿ ಬಾಳೆ ಹೂವಿನಿಂದಲೂ ಪತ್ರೊಡೆಯನ್ನು ಮಾಡಬಹುದಾಗಿದೆ.
ಬಾಳೆ ಹೂವಿನ ಪತ್ರೊಡೆ ಮಾಡಲು ಬೇಕಾಗುವ ಸಾಮಗ್ರಿಗಳು:
- ಬೆಳೆದ ಬಾಳೆ ಹೂವು 1
- ಅಕ್ಕಿ 2 ಲೋಟ
- ಒಂದು ಮುಷ್ಟಿ ಉದ್ದಿನಬೇಳೆ ಹಾಗೂ ಕಡಲೆಬೇಳೆ
- ಅರ್ಧ ಚಮಚ ಮೆಂತ್ಯ
- ಒಂದು ಕಪ್ ಕಾಯಿ
- 1 ಚಮಚ ಜೀರಿಗೆ
- 1 ಚಮಚ ಕೊತ್ತಂಬರಿ
- ಹುಣಸೆ ಹಣ್ಣು 1 ಸಣ್ಣ ಲಿಂಬೆ ಹಣ್ಣಿನ ಗಾತ್ರದ್ದು
- ಒಣಮೆಣಸು 9
- ಉಪ್ಪು ರುಚಿಗೆ ತಕ್ಕಷ್ಟು
ಬಾಳೆ ಹೂವಿನ ಪತ್ರೊಡೆ ಮಾಡುವ ವಿಧಾನ:
2 ಲೋಟ ಅಕ್ಕಿಯನ್ನು ತೊಳೆದು 3 ಗಂಟೆ ನೆನೆಸಿಟ್ಟುಕೊಳ್ಳಿ. ಹಾಗೆ ಇದಕ್ಕೆ ಒಂದು ಮುಷ್ಟಿ ಉದ್ದಿನಬೇಳೆ, ಕಡಲೆಬೇಳೆ ಹಾಗೂ ಅರ್ಧ ಚಮಚ ಮೆಂತ್ಯ ಅನ್ನು ಜೊತೆಗೆ ನೆನೆಯಲು ಹಾಕಿ. ನಂತರ ಬಾಳೆ ಹೂವಿನ ಹೊರಗಿನ 2 -3 ಪದರಗಳು ಹಾಗು ಬೆಳೆದ ಹಳದಿ ಹೂವುಗಳನ್ನು ತೆಗೆದುಹಾಕಬೇಕು. ನಂತರ ಇದನ್ನು ಸಣ್ಣಗೆ ಹೆಚ್ಚಿಕೊಂಡು ನೀರಿಗೆ ಹಾಕಿಕೊಳ್ಳಿ.
ಈಗಾಗಲೇ ನೆನೆಸಿಟ್ಟುಕೊಂಡಿರುವುದರ ಜೊತೆಗೆ ಒಂದು ಕಪ್ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ , ಜೀರಿಗೆ, ಹುಣಸೆ ಹಣ್ಣು, ಒಣಮೆಣಸು ಇವೆಲ್ಲವನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಬಾಳೆ ಹೂವನ್ನು ನೀರಿನಿಂದ ತೆಗೆದು ಈ ಹಿಟ್ಟಿಗೆ ಹಾಕಿ ಕಲಸಿಕೊಳ್ಳಿ.
ತದನಂತರ ಸಣ್ಣಗೆ ಬಾಳೆ ಎಲೆಯನ್ನು ಕತ್ತರಿಸಿ ಸ್ವಲ್ಪ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ಬಾಳೆ ಎಲೆಯ ಮಧ್ಯಕ್ಕೆ ಈಗಾಗಲೇ ತಯಾರಿಸಿಟ್ಟುಕೊಂಡಿರುವ ಹಿಟ್ಟನ್ನು ಹಾಕಿ ಬಾಳೆ ಎಲೆ ಮಡಿಸಿ ಇಡ್ಲಿ ಅಟ್ಟದಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿದರೆ ಬಾಳೆ ಹೂವಿನ ಪತ್ರೊಡೆ ತಯಾರಾಗುತ್ತದೆ.